ಕೌಶಿಕ

ವೇದಶಾಸ್ತ್ರಾಧ್ಯಯನ ನಿರತನಾದ ಬ್ರಾಹ್ಮಣ. ಒಮ್ಮೆ ಅರಣ್ಯದಲ್ಲಿ ಒಂದು ವೃಕ್ಷದ ಕೆಳಗೆ ಧ್ಯಾನಾಸಕ್ತನಾಗಿದ್ದಾಗ ಮರದ ಮೇಲಿದ್ದ ಕೊಕ್ಕರೆಯೊಂದು ಈತನ ತಲೆಯ ಮೇಲೆ ಹೇಸಿಗೆ ಮಾಡಿತು. ಬಹಿರ್ಮುಖನಾದ ಬ್ರಾಹ್ಮಣ ತಲೆಯೆತ್ತಿ ನೋಡಲಾಗಿ ಕೊಕ್ಕರೆ ಸುಟ್ಟು ಭಸ್ಮವಾಯಿತು. ಅಂದಿಗೆ ತನ್ನ ತಪಸ್ಸು ಸಿದ್ಧಿಯಾಯಿತೆಂಬ ಸಂತೋಷದಿಂದ ಕೌಶಿಕ ಭಿಕ್ಷಾರ್ಥಿಯಾಗಿ ಒಂದು ಗ್ರಾಮವನ್ನು ಸೇರಿ, ಒಬ್ಬ ಬ್ರಾಹ್ಮಣನ ಮನೆಯ ಮುಂದೆ ನಿಂತು ಭಿಕ್ಷೆ ಬೇಡಿದ. ಆದರೆ ಆ ಗೃಹಿಣಿ ಅದೇ ಸಮಯದಲ್ಲಿ ತನ್ನ ಗಂಡನಿಗೆ ಬಡಿಸುತ್ತಿದ್ದ ಕಾರಣ ಭಿಕ್ಷೆಯನ್ನು ತಡವಾಗಿ ತಂದಳು. ಭಿಕ್ಷೆ ತಂದ ಆಕೆಯನ್ನು ಕೌಶಿಕ ದುರುಗುಟ್ಟಿ ನೋಡಿದ. ಕೂಡಲೆ ಆ ಗೃಹಿಣಿ `ಅಯ್ಯಾ! ನಿನ್ನ ಸಿಟ್ಟಿಗೆ ಬಲಿಯಾಗಲಿಕ್ಕೆ ನಾನೇನು ಕೊಕ್ಕರೆಯಲ್ಲ ಎಂದಳು. ಈ ಮಾತು ಕೇಳಿ ಕೌಶಿಕ ಲಜ್ಜೆ ಮತ್ತು ಆಶ್ಚರ್ಯದಿಂದ ಆಕೆಗೆ ಅಡ್ಡ ಬಿದ್ದು ಈಗ ತಾನೆ ಅರಣ್ಯದಲ್ಲಿ ನಡೆದ ಈ ಸಂಗತಿ ತಮಗೆ ತಿಳಿದದ್ದು ಹೇಗೆಂಬುದನ್ನು ತಿಳಿಸಿ ಅನುಗ್ರಹಿಸಿ-ಎಂದು ಬೇಡಿದ. ಆಕೆ ಕೌಶಿಕನಿಗೆ ಕೆಲವು ಧರ್ಮರಹಸ್ಯವನ್ನು ಉಪದೇಶಿಸಿ ಇನ್ನೂ ಹೆಚ್ಚು ತಿಳಿಯುವುದಾದರೆ ಮಿಥಿಲಾನಗರವಾಸಿ ಧರ್ಮವ್ಯಾದನಲ್ಲಿಗೆ (ನೋಡಿ- ಧರ್ಮವ್ಯಾದ) ಹೋಗು ಎಂದಳು. ಕೌಶಿಕ ಅಲ್ಲಿಗೂ ಹೋಗಿ ಅನೇಕ ಧರ್ಮತತ್ತ್ವಗಳನ್ನು ತಿಳಿದ. 					*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ